ಹೊಸ ಬೆಳಕಿನಲ್ಲಿ “ವಾಲ್ಮೀಕಿಯ ಸೀತಾ"

ರಾಮಾಯಣದ ಸೀತೆಯ ಕತೆ ನಮಗೆಲ್ಲರಿಗೂ ತಿಳಿದಿದೆ. “ಮಹಾ ಪತಿವ್ರತೆ”ಎಂದು ಜನರು ಸೀತೆಯನ್ನು ಗೌರವಿಸುತ್ತಾರೆ.

ಆದರೆ ರಾಮಾಯಣದ ಹಲವು ರೂಪಾಂತರಗಳಿವೆ. ಅದರಿಂದಾಗಿ ಸೀತೆಯ ಬಗ್ಗೆ ವಾಲ್ಮಯ ರಾಮಾಯಣದಲ್ಲಿ ಇಲ್ಲದ ವಿವರಗಳು ಪ್ರಚಲಿತವಾಗಿವೆ. ಹಾಗಾಗಿ ಸೀತೆ ಒಬ್ಬ ಅಸಹಾಯಕ ಮಹಿಳೆ, ತ್ಯಾಗಮಯಿ ಮತ್ತು ತೀವ್ರ ಸಂಕಟಗಳನ್ನು ಅನುಭವಿಸಿದವಳು ಎಂದಷ್ಟೇ ಜನರು ಭಾವಿಸುತ್ತಾರೆ.

ಒಬ್ಬ ವ್ಯಕ್ತಿಯ ಬದುಕಿನ ಬಗ್ಗೆ ಹಲವು ಕತೆಗಳು ಲಭ್ಯವಿರುವಾಗ, ಆ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳಲು ಏನು ಮಾಡಬೇಕು? ಆ ವ್ಯಕ್ತಿಯ ಬಗೆಗಿನ ಮೂಲ ಕತೆಯನ್ನೇ ಅಧ್ಯಯನ ಮಾಡಬೇಕು.

ಆಳವಾದ ಅಧ್ಯಯನ

ಅದಕ್ಕಾಗಿ ಲೇಖಕ ಯಶೋದೀಪ್ ದಿಯೋಧರ್ ವಾಲ್ಮೀಕಿ ಬರೆದ ಮೂಲ ಸಂಸ್ಕೃತ ರಾಮಾಯಣವನ್ನು ಕಳೆದ ಎಂಟು ವರುಷಗಳಿಂದ ಆಳವಾಗಿ ಅಧ್ಯಯನ ಮಾಡಿದ್ದಾರೆ. ಐಐಟಿ ಮುಂಬಯಿಯಲ್ಲಿ ಇಂಜಿನಿಯರಿಂಗ್ ಮತ್ತು ಐಐಎಂ ಅಹಮದಾಬಾದಿನಲ್ಲಿ ಮೆನೇಜ್-ಮೆಂಟ್ ಕಲಿತಿರುವ ಅವರು ಹಲವಾರು ವರುಷ ಕಂಪೆನಿಗಳಲ್ಲಿ ವಿವಿಧ ಹುದ್ದೆಗಳಲ್ಲಿದ್ದವರು. ನಂತರ ಈಗಿನ ಓದುಗರಿಗಾಗಿ ರಾಮಾಯಣವನ್ನು ಸಂಸ್ಕೃತ ಶ್ಲೋಕಗಳಲ್ಲಿ ವಾಲ್ಮೀಕಿ ಹೇಳಿದಂತೆಯೇ ಚಿತ್ರಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ಅದರ ಅಧ್ಯಯನ ಕೈಗೆತ್ತಿಕೊಂಡರು.

ಅವರ ಅಧ್ಯಯನದ ಫಲವಾದ “ವಾಲ್ಮೀಕಿಯ ಸೀತಾ” ಪುಸ್ತಕ ಈ ವರುಷ ಲೋಕಾರ್ಪಣೆಯಾಗಿ ಓದುಗರ ಗಮನ ಸೆಳೆದಿದೆ. ಈ ಪುಸ್ತಕದ ಅಧ್ಯಾಯಗಳನ್ನು 100 ಎಪಿಸೋಡುಗಳ “21 ನೋಟ್ಸ್ ವಾಲ್ಮೀಕಿ ರಾಮಾಯಣ” ಎಂಬ ವಿಡಿಯೋ ಸರಣಿಯ ಮೂಲಕವೂ ಅವರು ಬಿಡುಗಡೆ ಮಾಡಿದ್ದಾರೆ ಎಂಬುದು ಗಮನಾರ್ಹ.

ನಿಜವಾಗಿ ಸೀತೆಯ ವ್ಯಕ್ತಿತ್ವ

ನಿಜವಾಗಿ ಸೀತೆಯ ವ್ಯಕ್ತಿತ್ವ ಹೇಗಿತ್ತು? ಇದನ್ನು ತಿಳಿಯಬೇಕಾದರೆ ಸೀತೆಯ ಬಗೆಗಿನ ಜನಪ್ರಿಯ ವೃತ್ತಾಂತಗಳನ್ನು ನಾವು ಬದಿಗಿಡಬೇಕು. ಅವುಗಳ ಬದಲಾಗಿ, ರಾಮಾಯಣದ ಮೂಲ ಸಂಸ್ಕೃತ ಶ್ಲೋಕಗಳಲ್ಲಿ ಸೀತೆಯ ವ್ಯಕ್ತಿತ್ವವನ್ನು ವಾಲ್ಮೀಕಿ ಹೇಗೆ ಕಟ್ಟಿ ಕೊಟ್ಟಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ಮಹರ್ಷಿ ವಾಲ್ಮೀಕಿ ಸೀತೆಯ ಕತೆಯನ್ನು ತೀರಾ ಅಪರೂಪದ ಕತೆಯಾಗಿ ಹೆಣೆದಿದ್ದಾರೆ. ಕಣ್ಣು ಮಿಟುಕಿಸುವಷ್ಟರಲ್ಲಿ ಅವಳ ಜಗತ್ತು ಕುಸಿದು ಬಿತ್ತು. ಅಯೋಧ್ಯೆಯ ರಾಜನಾಗಿ ಪಟ್ಟಾಭಿಷೇಕಕ್ಕೆ ಅಣಿಯಾಗುತ್ತಿದ್ದ ಶ್ರೀರಾಮ, ತನ್ನನ್ನು ಅತಿ ಹತ್ತಿರದಿಂದ ಕಂಡಿದ್ದ ಕೈಕೇಯಿ ಮಾಡಿದ ಅನ್ಯಾಯದಿಂದಾಗಿ, 14 ವರುಷಗಳ ವನವಾಸಕ್ಕೆ ಹೊರಡಬೇಕಾಯಿತು. ತನ್ನ ಪತಿ ಶ್ರೀರಾಮನೊಂದಿಗೆ ಅಖಂಡ ಬಂಡೆಯಂತೆ ನಿಲ್ಲುವ ಸೀತೆ, ತಾನೂ ದೀರ್ಘ ವನವಾಸಕ್ಕೆ ಹೋಗಿ, ಅಲ್ಲಿನ ತೀರಾ ಹೊಸ ಬದುಕಿಗೆ ಹೊಂದಿಕೊಳ್ಳುತ್ತಾಳೆ. ವನವಾಸದ ಸಂಕಟಗಳೆಲ್ಲ ಮುಗಿಯುತ್ತಿವೆ ಎನ್ನುವ ಹೊತ್ತಿನಲ್ಲಿ, ರಾಕ್ಷಸ ರಾವಣನು ಸೀತೆಯನ್ನು ಮೋಸದಿಂದ ಅಪಹರಿಸಿ, ಲಂಕೆಗೆ ಒಯ್ದು, ಆಕೆಯನ್ನು ತನ್ನವಳಾಗಿಸಲು ಇನ್ನಿಲ್ಲದ ಹಿಂಸೆ ನೀಡುತ್ತಾನೆ. ತನ್ನ ಸಹಾಯಕ್ಕಾಗಿ ಯಾರೊಬ್ಬರೂ ಇಲ್ಲದ ಆ ಅವಧಿಯಲ್ಲಿಯೂ ಅವನ್ನೆಲ್ಲ ಸೀತೆ ಹೆಬ್ಬಂಡೆಯಂತೆ ಎದುರಿಸುತ್ತಾಳೆ. ಅವಳ ಸಂಕಲ್ಪವನ್ನು ಯಾವ ಸಂಕಷ್ಟವೂ ಮುರಿಯಲಾಗಲಿಲ್ಲ. ಅವಳು ನಂಬಿದ ಉದಾತ್ತ ಮೌಲ್ಯಗಳು ಕಿಂಚಿತ್ತೂ ಅಲುಗಾಡಲಿಲ್ಲ.

ಜನಸಾಮಾನ್ಯರು ಸೀತೆ ಇತರ ಮಹಿಳೆಯರಿಗೆ ಆದರ್ಶಪ್ರಾಯಳು ಎಂದು ಭಾವಿಸುತ್ತಾರೆ. ಆದರೆ ಸೀತೆ ಅದಕ್ಕಿಂತಲೂ ಮಿಗಿಲಾದ ಅಪ್ರತಿಮ ಮಹಿಳೆ. ದೃಢವಾದ ಮನೋಬಲದಿಂದ ಬದುಕಿನ ಏರಿಳಿತಗಳನ್ನು ಎದುರಿಸುವುದು ಹೇಗೆ ಮತ್ತು ತಾನು ನಂಬಿದ ಮೌಲ್ಯಗಳನ್ನು ಎತ್ತಿ ಹಿಡಿಯುವುದು ಹೇಗೆ ಎಂಬುದನ್ನು ಮಾನವ ಜನಾಂಗಕ್ಕೆ ತೋರಿಸಿಕೊಟ್ಟ ಮಹಾನ್ ಮಹಿಳೆ.

ಸೀತೆಯ ಕತೆಯ ಪ್ರಸ್ತುತತೆ

ಸೀತೆಯ ಕತೆ ಇಂದಿಗೂ ಪ್ರಸ್ತುತವೇ? ಎಂಬ ಪ್ರಶ್ನೆ ಎದುರಾಗುತ್ತದೆ. ರಸ್ತೆಗಳಲ್ಲಿ ಕುದುರೆಗಳು ಓಡಾಡುತ್ತಿದ್ದ ಆಗಿನ ಕಾಲಕ್ಕೂ ವಿವಿಧ ವಾಹನಗಳು ಚಲಿಸುತ್ತಿರುವ ಈಗಿನ ಕಾಲಕ್ಕೂ ಬಹಳ ವ್ಯತ್ಯಾಸಗಳಿವೆ. ಆದರೆ ಸೀತೆ ಎದುರಿಸಿದ ಸಂಕಟಗಳನ್ನು ಈಗಿನ ಮಹಿಳೆಯರೂ ಮತ್ತೆಮತ್ತೆ ಎದುರಿಸುತ್ತಿದ್ದಾರೆ: ದ್ರೋಹ, ನಿರಾಸೆ, ಭರವಸೆಯಿಲ್ಲದ ಸ್ಥಿತಿ, ಅತ್ಯಂತ ಪ್ರೀತಿಪಾತ್ರರಿಂದ ದೂರವಾಗುವುದು, ಬೆದರಿಕೆ, ಬದುಕನ್ನೇ ತಲೆಕೆಳಗಾಗಿಸುವ ಪರಿಸ್ಥಿತಿ. ಧರ್ಮದ ನಡೆ ಮತ್ತು ಅನುಕೂಲದ ನಡೆಯ ಆಯ್ಕೆಯ ಸಂದಿಗ್ಧ ಕೂಡ ಸೀತೆಯಂತೆ ನಮಗೂ ಎದುರಾಗುತ್ತವೆ.

ಈ ಸವಾಲುಗಳನ್ನು ಹೇಗೆ ಎದುರಿಸಬೇಕೆಂದು ಸೂತ್ರಗಳನ್ನು ನಮಗೆ ಸೀತೆ ನೀಡುವುದಿಲ್ಲ. ಬದಲಾಗಿ ತನ್ನ ನಡತೆಯ ಮೂಲಕವೇ ತೋರಿಸಿಕೊಡುತ್ತಾಳೆ. ಆಕೆಯ ಕತೆಯನ್ನು ಓದುತ್ತಾ ಹೋದಂತೆ, “ನಾನೂ ಹೀಗೆ ಮಾಡಬಲ್ಲೆ” ಎಂಬ ಅರಿವು ಮೂಡುತ್ತದೆ. ಸೀತೆ ಏನು ಮಾಡಿದಳೆಂದು ಯೋಚಿಸುತ್ತಾ ಹೋದಂತೆ, ಸರಿಯಾದ ದಾರಿಯಲ್ಲಿ ಮುನ್ನಡೆಯುವ ಧೈರ್ಯ ಚಿಮ್ಮುತ್ತದೆ. ಬದುಕಿನ ಸವಾಲುಗಳನ್ನು ಎದುರಿಸುತ್ತಲೇ ಸಂತೋಷ ಕಂಡುಕೊಳ್ಳಬಹುದೆಂಬುದು ಸ್ಪಷ್ಟವಾಗುತ್ತದೆ.

ಸೀತೆಯ ಎರಡು ನಿರ್ಧಾರಗಳು

ಸೀತೆಯ ಬದುಕಿನ ಎರಡು ನಿರ್ಧಾರಗಳು ಅವಳ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತವೆ. ಮೊದಲನೆಯದು, ಶ್ರೀರಾಮ ವನವಾಸಕ್ಕೆ ಹೋಗಬೇಕಾಗುತ್ತದೆಂದು ತಿಳಿದಾಗ, ತಾನೂ ಜೊತೆಗೆ ಹೋಗುತ್ತೇನೆಂದು ಆಕೆ ತಕ್ಷಣವೇ ನಿರ್ಧರಿಸುತ್ತಾಳೆ. ಯಾಕೆಂದರೆ ಶ್ರೀರಾಮನೊಂದಿಗೆ ಇರುವುದೇ ಸ್ವರ್ಗ, ಆತನಿಂದ ದೂರವಿರುವುದೇ ನರಕ ಎಂಬುದವಳ ನಂಬಿಕೆ.

ಎರಡನೆಯದು, ರಾವಣ ಅಪಹರಿಸಿದಾಗ ಬೇಗನೆ ಆಘಾತದಿಂದ ಹೊರಬಂದು, ತನ್ನನ್ನು ಒಯ್ದ ದಿಕ್ಕು ಪತ್ತೆ ಮಾಡಲು ರಾಮಲಕ್ಷ್ಮಣರಿಗೆ ಸಹಾಯವಾಗಲೆಂದು ಆಭರಣಗಳನ್ನು ಪುಷ್ಪಕ ವಿಮಾನದಿಂದ ಕೆಳಗೆ ಎಸೆಯುತ್ತಾಳೆ. ಅನಂತರ ರಾವಣನ ಬೆದರಿಕೆಗಳು, ಆಮಿಷಗಳು, ಸುಳ್ಳಿನ ಕಂತೆಗಳು, ಶ್ರೀರಾಮನ “ತಲೆ”ಯನ್ನೇ ತೋರಿಸಿದ ಕಣ್ಕಟ್ಟು ಇತ್ಯಾದಿಗಳನ್ನೆಲ್ಲ ಧಿಕ್ಕರಿಸುತ್ತಾಳೆ. ಇವೆಲ್ಲದರಿಂದ ತನ್ನನ್ನು ಎದೆಗುಂದಿಸಲಾಗದೆಂದು ಖಡಾಖಂಡಿತವಾಗಿ ಹೇಳುತ್ತಾಳೆ. ಯಾಕೆಂದರೆ, ಅವಳು ಮತ್ತು ಶ್ರೀರಾಮ ಸೂರ್ಯ ಮತ್ತು ಸೂರ್ಯಕಿರಣಗಳಂತೆ ಅವಿಭಾಜ್ಯ.

ಸೀತೆಗೆ ಸಂದಿಗ್ಧಗಳು ಇರಲೇ ಇಲ್ಲ. ಬದಲಾಗಿ ಮನಸ್ಸಿನಲ್ಲಿ ಸ್ಪಷ್ಟತೆಯಿತ್ತು. ಬದುಕನ್ನು ನಿಯಂತ್ರಿಸುವುದರಿಂದ ಸಂತೋಷ ಸಿಗುವುದಿಲ್ಲ; ಬದಲಾಗಿ ಬದುಕಿನ ಮೌಲ್ಯಗಳ ಸ್ಪಷ್ಟತೆಯಿದ್ದರೆ, ಅದರಿಂದಾಗಿ ಎಲ್ಲ ಸವಾಲುಗಳನ್ನು ಎದುರಿಸುವ ಧೈರ್ಯ ಮೂಡುತ್ತದೆ ಎಂಬುದು ಸೀತೆಯ ಅಚಲ ನಂಬಿಕೆ. ಅದುವೇ ಎಲ್ಲರಿಗೂ ಸೀತೆಯ ಅಮರ ಸಂದೇಶ.

ಈ ಪುಸ್ತಕದಲ್ಲಿ

ಈ ಪುಸ್ತಕದಲ್ಲಿ 20 ಅಧ್ಯಾಯಗಳಲ್ಲಿ ಸೀತೆಯ ಕತೆ ಹೇಳಲಾಗಿದೆ. ಪ್ರತಿಯೊಂದು ಅಧ್ಯಾಯದಲ್ಲಿ ಎರಡು ಭಾಗಗಳಿವೆ. ಮೊದಲನೆಯ ಭಾಗದಲ್ಲಿ, ಮೂಲ ರಾಮಾಯಣದ ಸಂಸ್ಕೃತ ಶ್ಲೋಕಗಳಲ್ಲಿ ಮಹರ್ಷಿ ವಾಲ್ಮೀಕಿ ಚಿತ್ರಿಸಿದಂತೆಯೇ ರಾಮಾಯಣದ ಕಥೆಯನ್ನು ಸಂಕ್ಷಿಪ್ತವಾಗಿ ಪ್ರಸ್ತುತಪಡಿಸಲಾಗಿದೆ. ಎರಡನೆಯ ಭಾಗದಲ್ಲಿ, ಕತೆಯಿಂದ ದಕ್ಕುವ ಒಳನೋಟಗಳನ್ನು ವಿವರಿಸಲಾಗಿದೆ.

“ಮುಕ್ತಾಯದ ನಂತರ” (ಆಫ್ಟರ್ ವರ್ಡ್) ಎಂಬ 21ನೇ ಅಧ್ಯಾಯವು “ಸೀತೆಯ ಕತೆ ಎಲ್ಲಿ ಮುಗಿಯುತ್ತದೆ” ಎಂಬ ವಿದ್ವತ್ ಪೂರ್ಣ ಪ್ರಬಂಧ.

ರಾಮಾಯಣದಲ್ಲಿ “ಬಾಲಕಾಂಡ”ದಿಂದ “ಉತ್ತರಕಾಂಡ”ದ ವರೆಗೆ ಏಳು ಕಾಂಡಗಳಿವೆ. ಈ ಪುಸ್ತಕದಲ್ಲಿ “ಬಾಲಕಾಂಡ”ದಿಂದ “ಯುದ್ಧಕಾಂಡ” (6ನೇ ಕಾಂಡ) ವರೆಗಿನ ಕತೆಯನ್ನು ಮಾತ್ರ ಪ್ರಸ್ತುತಪಡಿಸಲಾಗಿದೆ. ಅಲ್ಲಿಗೆ ರಾಮಾಯಣದ ಕತೆ ಮುಗಿಯುತ್ತದೆ ಎಂದು ಲೇಖಕರು ಪ್ರತಿಪಾದಿಸುತ್ತಾರೆ. ಯಾಕೆಂದರೆ, “ಯುದ್ಧಕಾಂಡ”ದ ಮುಕ್ತಾಯದಲ್ಲಿ, ರಾವಣನನ್ನು ಕೊಂದು ಅಯೋಧ್ಯೆಗೆ ಮರಳಿದ ಶ್ರೀರಾಮನಿಗೆ ಸೀತೆಯೊಂದಿಗೆ ಪಟ್ಟಾಭಿಷೇಕವಾದ ನಂತರ ವಾಲ್ಮೀಕಿ ಹೀಗೆಂದು ಬರೆದಿದ್ದಾರೆ: “ಎಲ್ಲರೂ ಸಂತೋಷದಿಂದ ಇದ್ದರು”, “ಇದು ಸಂಪೂರ್ಣ ರಾಮಾಯಣದ ಕತೆ”, “ಇದನ್ನು ಓದಿದವರಿಗೆ ಉತ್ತಮ ಪ್ರತಿಫಲಗಳು ಸಿಗುತ್ತವೆ”, “ನಿಮಗೆಲ್ಲರಿಗೂ ಒಳ್ಳೆಯದಾಗಲಿ”. ಈ ಮಾತುಗಳು ರಾಮಾಯಣದ ಮುಕ್ತಾಯವನ್ನು ಸ್ಪಷ್ಟವಾಗಿ ಸೂಚಿಸುತ್ತವೆ.

ಏಳನೇ ಕಾಂಡ “ಉತ್ತರಕಾಂಡ”

ಹಾಗಾಗಿ, ಏಳನೇ ಕಾಂಡ “ಉತ್ತರಕಾಂಡ” ಮಹರ್ಷಿ ವಾಲ್ಮೀಕಿ ಬರೆದದ್ದಲ್ಲ; ಅವರ ಕಾಲಾನಂತರ ಬೇರೆ ಯಾರೋ ರಾಮಾಯಣಕ್ಕೆ ಸೇರಿಸಿದ್ದು ಎಂದು ಲೇಖಕರು ಹಲವು ವಿವರಣೆಗಳ ಮೂಲಕ ವಾದಿಸುತ್ತಾರೆ. ಶ್ರೀರಾಮ ಯಾರದೋ ಟೀಕೆಗೆ ಹೆದರಿ ಸೀತೆಯನ್ನು ಕಾಡಿಗೆ ಅಟ್ಟಿದ್ದು; ನಂತರ ಮಹರ್ಷಿ ವಾಲ್ಮೀಕಿಯವರ ಆಶ್ರಮದಲ್ಲಿ ಲವ-ಕುಶರಿಗೆ ಸೀತೆ ಜನ್ಮ ನೀಡಿದ್ದು; ಅನಂತರ ಶ್ರೀರಾಮನ ಅಶ್ವಮೇಧ ಯಾಗದಲ್ಲಿ ಭಾಗವಹಿಸಲು ವಾಲ್ಮೀಕಿ ಮತ್ತು ಲವ-ಕುಶರು ಆಗಮಿಸಿದ್ದು; ಆಗ ಸೀತೆಯನ್ನು ಕರೆಯಿಸಿದ ರಾಮ, ಆಕೆ ತನ್ನ ನಿರ್ದೋಷತ್ವ ಸಾಬೀತು ಪಡಿಸಬೇಕೆಂದಾಗ ಸೀತೆ ನೊಂದುಕೊಂಡದ್ದು; ತಾನು ನಿರ್ದೋಷಿ ಎಂದು ಸ್ಪಷ್ಟವಾಗಿ ಘೋಷಿಸಿದ ಸೀತೆ “ನನ್ನ ಮಾತು ಸತ್ಯವಾಗಿದ್ದರೆ ಭೂಮಾತೆ ನನ್ನನ್ನು ಕರೆಸಿಕೊಳ್ಳಲಿ” ಎಂದಾಗ ಭೂಮಿ ಸೀಳಿಕೊಂಡು ಸೀತೆ ಅಂತರ್ಧಾನಳಾದದ್ದು - ಇವೆಲ್ಲ ಕತೆಗಳು “ಉತ್ತರಕಾಂಡ”ದಲ್ಲಿವೆ. ಯುದ್ಧಕಾಂಡದ ವರೆಗಿನ ಸೀತೆಯ ವ್ಯಕ್ತಿತ್ವ ಚಿತ್ರಣಕ್ಕೆ ಉತ್ತರಕಾಂಡದವು ತಾಳೆಯಾಗುವುದಿಲ್ಲ ಎಂದು ಲೇಖಕರು ಹಲವು ಶ್ಲೋಕಗಳ ಅರ್ಥಗಳ ಪುರಾವೆಗಳ ಮೂಲಕ ಪ್ರತಿಪಾದಿಸುತ್ತಾರೆ.

“ಉತ್ತರಕಾಂಡ”ದ ಕಥೆಗಳು ರಾಮಾಯಣದ ಸೀತೆಯ ಕತೆಯ ಮೇಲೆ ನೇರ ಪರಿಣಾಮ ಬೀರುತ್ತವೆ. ಅವನ್ನು ಒಪ್ಪಿಕೊಂಡರೆ ಸೀತೆಯದ್ದು ದುರಂತ ಕತೆ ಮತ್ತು ಅವನ್ನು ತಿರಸ್ಕರಿಸಿದರೆ ಸೀತೆಯದು ಸುಖಾಂತ್ಯ ಕತೆ. ಅದ್ದರಿಂದ, ಯುದ್ಧಕಾಂಡದ ವರೆಗಿನ ರಾಮಾಯಣವನ್ನಷ್ಟೇ ಸ್ವೀಕರಿಸಿ, ಮಹಾಮಾತೆ ಸೀತೆ ಮಾನವ ಜನಾಂಗಕ್ಕೇ ಆದರ್ಶವೆಂದು ಒಪ್ಪಿಕೊಳ್ಳೋಣ.

ಮಹಾನ್ ಕಾವ್ಯ ರಾಮಾಯಣದ 24,000 ಶ್ಲೋಕಗಳನ್ನು ಓದಿ ಅರ್ಥ ಮಾಡಿಕೊಳ್ಳುವುದು ಸುಲಭದ ಕೆಲಸವಲ್ಲ. ಎಂಟು ವರುಷ ಶ್ರದ್ಧೆಯಿಂದ ಆ ಕೆಲಸ ಮಾಡಿರುವ ಲೇಖಕರು, ಸರಳ ಭಾಷೆಯಲ್ಲಿ ರಾಮಾಯಣದ ತಿರುಳು ಮತ್ತು ಸೀತೆಯ ಬದುಕಿನ ಸಂದೇಶವನ್ನು ಈ ಪುಸ್ತಕದಲ್ಲಿ ನಮಗೆ ನೀಡಿದ್ದಾರೆ. ಇದನ್ನು ಓದುತ್ತಾ, ತನ್ನ ಬದುಕಿಗೆ ಸೀತೆಯ ಬದುಕಿನ ಸಂದೇಶ ಹೇಗೆ ಬೆಳಕಾಗುತ್ತದೆ ಎಂಬುದನ್ನು ಪ್ರತಿಯೊಬ್ಬ ಓದುಗನೂ ಕಂಡುಕೊಂಡರೆ ಲೇಖಕರ ಶ್ರಮ ಸಾರ್ಥಕ.